ಇಟಾಲಿಯನ್ ಭಾಷೆ
ಇಟಲಿ ದೇಶದ ಶಿಷ್ಟ ಭಾಷೆ. ಸ್ವಿಟ್ಜರ್ಲೆಂಡ್ ಅಧಿಕೃತವಾಗಿ ಮನ್ನಣೆ ನೀಡಿರುವ ನಾಲ್ಕು ಭಾಷೆಗಳಲ್ಲಿ ಇದೂ ಒಂದು. ಅನೇಕ ಮಂದಿ ಇಟಾಲಿಯನ್ನರು ಸ್ಥಳೀಯ ಉಪಭಾಷೆಗಳನ್ನು ಬಳಸುವುದರಿಂದಲೂ ಈ ಅಧಿಕೃತ ಭಾಷೆಯ ಮೇಲೆ ಸಂಪೂರ್ಣ ಪ್ರಭುತ್ವವನ್ನು ಹೊಂದಿಲ್ಲದೆ ಇರುವುದರಿಂದಲೂ ಇಟಾಲಿಯನ್ ಭಾಷೆಯನ್ನು ಬಳಸುವವರ ಸಂಖ್ಯೆ ಎಷ್ಟೆಂಬುದನ್ನು ಅಂದಾಜುಮಾಡುವುದು ಕಷ್ಟ. ಅಲ್ಲದೆ, ಇಟಲಿಯಿಂದ ಉತ್ತರ ಮತ್ತು ದಕ್ಷಿಣ ಅಮೆರಿಕ ದೇಶಗಳಿಗೆ ವಲಸೆ ಹೋಗಿರುವ ವ್ಯಕ್ತಿಗಳು ಇಟಾಲಿಯನ್ ಭಾಷೆಯನ್ನು ಬಳಸುತ್ತಿದ್ದಾರೆ. ಪೂರ್ವ ಮೆಡಿಟರೇನಿಯನ್ ವಲಯದಲ್ಲೂ ಈ ಮೊದಲು ಇಟಲಿಯ ವಸಾಹತುಗಳಾಗಿದ್ದ ಆಫ್ರಿಕ ದೇಶದ ಭಾಗಗಳಲ್ಲೂ ಸಂಪರ್ಕ ಮಾಧ್ಯಮವೆಂಬಂತೆ ಇಟಾಲಿಯನ್ ಭಾಷೆಯನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. 

ಇತರ ರೋಮನ್ಸ್ ಭಾಷೆಗಳಂತೆ, ಇಟಾಲಿಯನ್ ಭಾಷೆ ಪ್ರಾಚೀನ ರೋಮನ್ ಗಣರಾಜ್ಯ ಮತ್ತು ಮುಂದಿನ ಸಾಮ್ರಾಜ್ಯದಲ್ಲಿ ಬಳಕೆಯಲ್ಲಿದ್ದ ಲ್ಯಾಟಿನ್ ಭಾಷೆಯ ದಿನನಿತ್ಯದ ಆಡುಮಾತಿನಿಂದ ರೂಪುಗೊಂಡದ್ದು. ಆಧುನಿಕ ಸಾಹಿತ್ಯಕ ಇಟಾಲಿಯನ್ ಭಾಷೆಗೆ ಮೂಲಾಧಾರವಾಗಿರುವ ಹದಿನಾಲ್ಕನೆಯ ಶತಮಾನದ ಟಸ್ಕನ್ ಭಾಷೆಗೂ ನಾಲ್ಕನೆಯ ಶತಮಾನದ ಲ್ಯಾಟಿನ್ ಭಾಷೆಗೂ ಅತ್ಯಂತ ನಿಕಟವಾದ ಸಂಬಂಧವಿತ್ತು. ಮಧ್ಯಯುಗದ ಅನಂತರ ಈ ಭಾಷೆಯ ರಚನೆಯ ಸ್ವರೂಪದಲ್ಲಿ ಯಾವ ಹೆಚ್ಚಿನ ಬದಲಾವಣೆಯೂ ಆಗಿಲ್ಲ. ಶಿಷ್ಟ ಇಟಾಲಿಯನ್ ಭಾಷೆಯಲ್ಲಿ ಏಳು ಸ್ವರಧ್ವನಿಮಾಗಳೂ ಹತ್ತೊಂಬತ್ತು ವ್ಯಂಜನಗಳೂ ಇವೆ. ಕಾಗುಣಿತ ಅದರ ಧ್ವನಿಮಾರಚನೆಗೆ ಅತ್ಯಂತ ನಿಕಟ ಸಂಬಂಧವನ್ನು ಹೊಂದಿದೆ. ಲ್ಯಾಟಿನ್‍ನಲ್ಲಿರುವಂತೆಯೇ ಇಟಾಲಿಯನ್ ಭಾಷೆಯಲ್ಲೂ ಎರಡು ಲಿಂಗಗಳು, ಎರಡು ವಚನಗಳು, ಮೂರು ವಿಭಕ್ತಿಗಳು (ಸರ್ವನಾಮಗಳಲ್ಲಿ ಮಾತ್ರ) ಮತ್ತು ಎಂಟು ಕಾಲಗಳು ಕಂಡುಬರುತ್ತವೆ. ಉದಾ : ಮೊಂಡೊ-ಪ್ರಪಂಚ, ಮೊಂಡಿ-ಪ್ರಪಂಚಗಳು (ಪುಲ್ಲಿಂಗ). ಪೋರ್ತ-ಬಾಗಿಲು, ಪೋರ್ತೆ-ಬಾಗಿಲುಗಳು (ಸ್ತ್ರೀಲಿಂಗ), ಎಗ್ಲಿ-ಅವನು, ಗ್ಲಿ-ಅವನಿಗೆ, ಲೊ-ಅವನನ್ನು, ವೆದೆರೆ-ನೋಡಲು, ವೆದೊ-ನಾನು ನೋಡುತ್ತೇನೆ. ವೆದವೂ-ನಾನು ನೋಡುತ್ತಿದ್ದೆ-ಇತ್ಯಾದಿ. ಇಟಾಲಿಯನ್ ಭಾಷೆಯ ವಾಕ್ಯರಚನೆಯೂ ರುಮೇನಿಯನ್ ಅಥವಾ ಸ್ಪಾನಿಷ್‍ನಂಥ ಸಂಪ್ರದಾಯನಿಷ್ಠ ರೋಮನ್ಸ್ ಭಾಷೆಗಳಲ್ಲಿರುವಂತೆಯೇ ಇದೆ. ಕ್ರಿಯಾಪದದ ಧಾತುರೂಪದೊಡನೆ ಒಂದು ಅಥವಾ ಎರಡು ಸರ್ವನಾಮ ಶಬ್ದಗಳನ್ನು (ಸಂಯುಕ್ತವಾಗಿ) ಬಳಸಬಹುದು. ಉದಾ : ಲೊ ವೆದೊ-ನಾನು ಅವನನ್ನು ನೋಡುತ್ತೇನೆ. ಮೇ ಲೊ ದ-ಅವನು ಅದನ್ನು ನನಗೆ ಕೊಡುತ್ತಾನೆ. ವಾಕ್ಯರಚನೆಯ ತಿರುಳು ಕ್ರಿಯಾಪದ. ಉದಾ : ವೆದೊ-ನಾನು ನೋಡುತ್ತೇನೆ. ಕರ್ತೃಪದ ಗೌಣ ಆಂಶವಾಗಿದ್ದು ಕಾರ್ಯನಿರತನಾಗುವ ವ್ಯಕ್ತಿಯ ಅಸ್ತಿತ್ವವನ್ನು ವಿವರಿಸುತ್ತದೆ ಅಥವಾ ಒತ್ತಿ ಹೇಳುತ್ತದೆ. ಉದಾ: ಲೊ ವೆದೊ-ನಾನು ನೋಡುತ್ತೇನೆ. 

ಪ್ರಾಚೀನ ಇಟಾಲಿಯನ್ ಭಾಷೆಯಲ್ಲಿನ ಶಬ್ದಕೋಶ ಬಹುವಾಗಿ ಲ್ಯಾಟಿನ್ ಭಾಷೆಯಿಂದಲೇ ನೇರವಾಗಿ ನಿಷ್ಪನ್ನವಾಗಿದೆ. ಉದಾ : ಹೋಮೊ ಎಂಬುದರಿಂದ ಉಒಮೋ (ಮನುಷ್ಯ), ಆರಮ್ ಎಂಬುವುದರಿಂದ ಓರೋ(ಚಿನ್ನ), ಪ್ರಾವೆಂಕಲ್ ಅಥವಾ ಫ್ರೆಂಚ್ ಭಾಷೆಯಿಂದ ಅನೇಕ ಶಬ್ದಗಳನ್ನು ಸ್ವೀಕರಿಸಲಾಗಿದೆ. ಉದಾ : ಪ್ರಾವೆಂಕಲ್ ಭಾಷೆಯ ವೆಂಜಾರ್ ಎಂಬುದರಿಂದ ವೆಂಜಿಯೇರ್ (ಸೇಡು ತೀರಿಸಿಕೊಳ್ಳುವುದು); ಅಥವಾ ಪ್ರಾಚೀನ ಫ್ರೆಂಚ್ ಭಾಷೆಯ ವಿಯೇಜ್ ಎಂಬುದರಿಂದ ವಿಯಾಜ್ಜಿಯೋ (ಪ್ರಯಾಣ). ಹೊಸಹುಟ್ಟಿನ ಕಾಲದಲ್ಲಿ ಲ್ಯಾಟಿನ್ ಭಾಷೆಯಿಂದಲೇ ನೇರವಾಗಿ ಶಬ್ದಗಳನ್ನು ಸ್ವೀಕರಿಸುವ ಪ್ರವೃತ್ತಿ ಹೆಚ್ಚಾಯಿತು. ಉದಾ: ಎತಿಯಾಮ್ (ಕೂಡ) ಎಂಬುದರಿಂದ ಎಜಿóಯಾಂದಿಯೋ (ಕೂಡ). ಈವನ್ (ಕೂಡ), ಮತ್ತು ದ್ಯೂಸ್-(ಇಂದ) ದೇವರು. ಬ್ಯಾರೋಕ್ ಅವಧಿಯಲ್ಲಿ ಸ್ಟ್ಯಾನಿಷ್ ಸ್ವೀಕರಣ ಕಾಣಬಂದು. ಉದಾ: ಅಟ್ರಿವಿಮಿಯೆಂಟೊ ಎಂಬುದರಿಂದ ಅಟ್ರೆವಿಮೆಂಟೋ (ಧೈರ್ಯ). ಆಧುನಿಕ ಯೂರೋಪಿಯನ್ ಭಾಷೆಗಳಿಂದ ಇಟಾಲಿಯನ್ ಭಾಷೆ ಶಬ್ದಗಳನ್ನು ಸ್ವೀಕರಿಸುತ್ತಿದೆ ಎಂಬುದಕ್ಕೆ ಈ ಕೆಳಕಂಡ ಉದಾಹರಣೆಗಳೇ ಸಾಕು. ಆಧುನಿಕ ಇಟಾಲಿಯನ್ನಿನ ನೆಯ್‍ಲಾನ್ (ಇಂಗ್ಲಿಷಿನ ನೈಲಾನ್). ಸಬ್‍ಕಾನ್ಸಿಯೋ-ಸಬ್‍ಕಾನ್ಸಿಯಸ್-(ಫ್ರೆಂಚಿನ ಸಬ್‍ಕಾನ್ಸಿಯೆಂಟ್) ಮತ್ತು ಬೋಲ್‍ಸೆವಿಕೋ (ರಷ್ಯನ್ ಭಾಷೆಯ ಬೋಲ್‍ಶೆವಿಕ್).             
    
(ಆರ್.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ